ನಾಗಬನದ ಕಾಂಕ್ರೀಟ್ ಕಟ್ಟೆಯೊಳಗೆ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡ ಹುತ್ತಕ್ಕೆ ನಾಗರಪಂಚಮಿಯಂದು ಹಾಲೆರೆದು ಪೂಜಿಸುವುದು ನಮ್ಮ ವಾಡಿಕೆ.ಇಲ್ಲಿ ಸರ್ಪ ದೇವರು ನೆಲೆಸಿರುವನೆಂಬ ನಂಬಿಕೆ,ಸಂಕಲ್ಪ.ಆದರೆ ಸಾಮಾನ್ಯವಾಗಿ ತಂಪಾದ ಪರಿಸರವನ್ನು ಪ್ರೀತಿಸುವ ಹಾವುಗಳು ಜನರ ಅಬ್ಬರವಿರದಿದ್ದಲ್ಲಿ ಮಾತ್ರ ಹುತ್ತದೊಳಗೆ ಆಶ್ರಯ ಪಡೆಯುತ್ತವೆ.ಇದಕ್ಕೆ ಕಾರಣ ಆ ಮಣ್ಣಿನ ಮನೆಯೊಳಗಿನ ಹವಾ ನಿಯಂತ್ರಣ ವ್ಯವಸ್ಥೆ.ಹುತ್ತದ ಮೇಲ್ಮೈ ಚೂಪಾಗಿ ಇರುವ ಕಾರಣ ಸೂರ್ಯನ ಶಾಖವನ್ನು ಹೆಚ್ಚಾಗಿ ಹೀರದು,ಹಾಗೂ ತಂಪಾದ ಹವೆಯನ್ನು ಹಿಡಿದಿಡುವ ಮಣ್ಣ ಕಣಗಳ ಜೋಡಣೆಯೂ ಬಲು ನಾಜೂಕಾದ ಕೆಲಸ.
ಹೀಗೆ ಮಣ್ಣನ್ನು ಹದ ಮಾಡಿ ಮನೆಕಟ್ಟುವ ಕಲೆ ತಿಳಿದಿರುವ ಗೆದ್ದಲು ಹುಳುಗಳ ಜೀವನ ಚಕ್ರವೂ ಆಸಕ್ತಿಕರ. ಇಲ್ಲಿ ರಾಣಿ,ಸೇವಕರು,ಸೈನಿಕರು ಎಲ್ಲರಿಗೂ ಕೈತುಂಬ ಕೆಲಸ.ರಾಣಿ ಹುಳಕ್ಕೆ ಮೊಟ್ಟೆ ಇಡುವುದೇ ಕೆಲಸವಾದರೆ,ಇನ್ನು ಮನೆ ಕಟ್ಟುವುದು.ಆಹಾರ ಸಂಗ್ರಹಣೆ ಎಲ್ಲಾ ಸೇವಕರ ಕೆಲಸ.ಸೈನಿಕರ ದೇಹ ರಚನೆಯೇ ವಿಭಿನ್ನ.ತಮ್ಮ ಪ್ರಮುಖ ಎದುರಾಳಿಗಳಾದ ಇರುವೆಗಳ ಸೈನ್ಯವನ್ನು ಮಟ್ಟ ಹಾಕಲು ವಿಷದ ಜೊಲ್ಲು,ಗಟ್ಟಿ ಮುಟ್ಟಾದ ಎದುರು ದವಡೆ ಇತ್ಯಾದಿ.ಹುತ್ತದ ಬಾಗಿಲಲ್ಲೇ ಸರದಿ ಪ್ರಕಾರ ಒತ್ತೊತ್ತಾಗಿ ನಿಲ್ಲುವ ಜಾಯಮಾನ ಇವರದ್ದು.ಮೊದಲಿನ ಸೈನಿಕ ಹೋರಾಡಿ ಸತ್ತರೆ ಎರಡನೆಯದ್ದರ ಸರದಿ. ಒಂದು ಕ್ರಿಮಿ,ಕೀಟವನ್ನೂ ಒಳಗೆ ಬಿಡದೆ ಇಡೀ ಅರಮನೆಗೆ ಕಾವಲಾಗುವುದು ಈ ಪುಟ್ಟ ಸೈನ್ಯ.
ಉಷ್ಣ ವಲಯದಲ್ಲಿ ಮಳೆಗಾಲದ ಮೊದಲ ಮಳೆಗೆ ರೆಕ್ಕೆ ಮೂಡಿ ಸ್ವಲ್ಪ ಹೊತ್ತು ಹಾರಡುವ ಗೆದ್ದಲುಗಳ ಸಂತಾನೋತ್ಪತ್ತಿಗೂ ಆಗಲೇ ತಯಾರಿ ನಡೆಯುತ್ತದೆ.ಆದರೆ ಆಫ್ರಿಕಾದಂತಹ ತಂಪು ವಲಯಗಳಲ್ಲಿ ವರ್ಷದುದ್ದಕ್ಕೂ ಹಾರಾಡುವ ಸಾಮರ್ಥ್ಯವನ್ನು ಪಡೆದ ಪ್ರಭೇದಗಳಿವೆ.ಇವುಗಳ ಸಂತತಿಯೂ ಬೃಹತ್ ಆಗಿ ಬೆಳೆದು ಬಿಡುವುದಕ್ಕೆ ಕಾರಣವೆಂಬುದು ಅನ್ಯೋನ್ಯತೆ.ಯಾವಾಗಲೂ ಸೇವಕ ಹುಳುಗಳು “ಸೆಲ್ಯುಲೇಸ್” ಎಂಬ ಹಾರ್ಮೋನು(ಗ್ರಂಥಿ ರಸ) ಉಪಯೋಗಿಸಿ ಹದ ಮಾಡಿ ಕೊಳ್ಳುವ ಆಹಾರವನ್ನು ಎಲ್ಲರಿಗೂ ಸಮಾನವಾಗಿ ಹಂಚಿರುತ್ತವೆ. ಇವುಗಳ ಅನ್ನನಾಳದೊಳಗೆ ಸಿಂಬಯೋಟಿಕ್ ಶಿಲೀಂದ್ರಗಳೂ ಇವೆ.ಮಣ್ಣಿನ ವಾತಾವರಣವನ್ನು ಕಾಪಾಡುವ Termitomicoses ಶಿಲೀಂದ್ರಗಳು ಖನಿಜಗಳ ಆವೃತ್ತಿ(mineral cycling)ಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ.
ಇನ್ನು ಸವನ್ನ ಕಾಡುಗಳಲ್ಲಿ ೩ ಮೀಟರಿಗಿಂತಲೂ ಎತ್ತರಕ್ಕೆ ಬೆಳೆಯುವ ಹುತ್ತಗಳಿವೆ.Australia ದಲ್ಲಿ ಬಿಳಿ ಇರುವೆ (white ants) ಎಂದು ಕರೆಯಲ್ಪಡುವ ಗೆದ್ದಲುಗಳು Blattodea ಎಂಬ ವರ್ಗದ Termitoidae ಕುಟುಂಬಕ್ಕೆ ಸೇರಿದ್ದು ನಮ್ಮ ಜಿರಳೆಗೆ ಹತ್ತಿರದ ಸಂಬಂಧಿ.ಆಫ್ರಿಕಾದ ಕೆಲವು ಗೋತ್ರ ಪಂಗಡದ ಜನರು ರಾತ್ರಿ ಕಾಡೊಳಗೆ ದೀಪವನ್ನಿಟ್ಟು ಅದರ ಸುತ್ತಲೂ ಹಾರಾಡುವ ಗೆದ್ದಲುಗಳನ್ನು ಹಿಡಿದು ಫ್ರೈ ಮಾಡಿ ಸವಿಯುತ್ತಾರೆ!
ಗೆದ್ದಲು ಕಟ್ಟುವ ಗೂಡಿಗೆ ಹಾವು ಬಂದು ಸೇರಿಕೊಳ್ಳುತ್ತದೆ ಎನ್ನುವುದು ಗೊತ್ತಿತ್ತು ಅಷ್ಟೆ. ಹುತ್ತದ ಬಗೆಗೆ ಕುತೂಹಲಕರವಾದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ಕೊನೆಯ ಸಾಲು ಓದಿ...ಉಫ್..!
ReplyDelete