Wednesday, April 8, 2020


ಹುಳಿ ಹಿಂಡುವ ಮುಳ್ಳು ಗೋಗು :
ಹೊಸ ತಲೆಮಾರಿನ  ಅಡುಗೆ  ಪ್ರವೀಣ/ಣೆಯರು ತರಹೇವಾರಿ ಅಡುಗೆಯನ್ನು ಮಾಡಬಲ್ಲರು.ಆದರೆ  ನಮ್ಮ ಮುತ್ತಜ್ಜಿ ಹಿರಿಯರ ಕಾಲದವರು  ತಯಾರಿಸುತ್ತಿದ್ದ ಅಡುಗೆ ಪಾಕಗಳ ಹಿಂದೆ ಅತ್ಯಂತ  ಆರೋಗ್ಯಕರ ಹಾಗೂ ವೈಜ್ಞಾನಿಕ ಹಿನ್ನಲೆಯಿತ್ತು.ಅಡುಗೆಗೆ ಸಂಬಧಿಸಿದ ಅದೆಷ್ಟೋ ಸರಳ ಸೂತ್ರಗಳು ಈಗಾಗಲೇ ನಶಿಸಿ ಹೋಗಿವೆ.ಹಳೆಯ ಕಾಲದ ಪಾಕ ಪುಸ್ತಕಗಳನ್ನು ಓದಿದರೆ ನಮ್ಮ ಭಾರತದಅಡುಗೆ ಪದ್ದತಿಗಳು ಎಷ್ಟು ಗುಣ ಮಟ್ಟದ್ದಾಗಿದ್ದವು ಎಂದು ತಿಳಿಯಬಹುದು. 
ಅಂದ ಹಾಗೆ ಹುಳಿ ಹಿಂಡದ  ಯಾವುದಾದರೂ ಮನೆಗಳಿವೆಯೇ?! ತಪ್ಪು ತಿಳಿಯಬೇಡಿ..
ದಿನ ನಿತ್ಯದ ಅಡುಗೆಯಲ್ಲಿ ಹುಳಿಯ ಬಳಕೆ ಇದ್ದೇ ಇದೆ.ಈಗ ಎಪ್ರಿಲ್ ತಿಂಗಳು  ಹುಣಸೆ ಹುಳಿ ಸೀಸನ್ ಬೇರೆ.  ಕಿಲೋ ಒಂದಕ್ಕೆ 300 ವರೆಗೆ ತೆತ್ತಾದರೂ ಒಳ್ಳೆ ಹುಳಿ ಸ್ವಲ್ಪ ಸಿಕ್ಕರೆ ಸಾಕು ಎಂಬುದು ಅಡುಗೆ ಪ್ರಿಯರ ಅಂಬೋಣ.
ಏನಾದರೂ ಸರಿ "ಕೇನೆ ಕರಿ" ಗೆ ಹುಳಿನೀರು ಬೇಕೇ ಬೇಕು.ಕೇನೆ ಹೋಳುಮಾಡುವಾಗಲೇ ಕೈ ತುರಿ ಆರಂಭ.ಹೋಳನ್ನು ಬೇಯಿಸಿದ ನೀರನ್ನು ಚೆಲ್ಲಿ ಪುನಹ ಹುಣಸೆ ಹುಳಿ ಕಿವುಚಿದ ನೀರಿನಲ್ಲೂ ಬೇಯಿಸಿದಾಗಲೇ ಈ ಕಿರಿ ಕಿರಿಗೆ ಮುಕ್ತಿ.ಇದಕ್ಕೆ ಹುಣಸೆ ಹುಳಿ ಅಲ್ಲದೇ ಬೇರೆ ಉಪಾಯವೂ ಇದೆ ನಮ್ಮ ಹಿರಿಯರ ಕೈಯಲ್ಲಿ !!. 

ಸುವರ್ಣ ಗಡ್ಡೆ/ಕೇನೆ


Hibiscus surattensis ಅಥವಾ ಮುಳ್ಳು ಗೋಗನ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.ದಾಸವಾಳ ಕುಟುಂಬವಾದ Malvaceae ಗೆ ಸೇರಿದ ಕಾಟುಪುಳಿಕ್ಕಾಯ್ ಎಂದೇ ಕೇರಳೀಯರು ಕರೆಯುವ ಹುಳಿ ಸೊಪ್ಪಿನ ಗಿಡ. ಗಿಡ ತುಂಬಾ ಸಣ್ಣ ಮುಳ್ಳುಗಳಿರುವ ಬಳ್ಳಿಯಾಗುವ ಪೊದೆ ಸಸ್ಯ.ಹಳದಿ ದಳದ ಮದ್ಯೆ ಕೆಂಬಣ್ಣದ ಬೊಟ್ಟು ಇರುವ ದಾಸವಾಳದಂತಹ ಹೂವು ನೋಡಲು ಚಂದ.ಸಾಧಾರಣವಾಗಿ ತೋಟದ ಅಂಚಿನಲ್ಲಿ,ಬೇಲಿ ಬದಿಯಲ್ಲಿ ಕಾಣಸಿಗುವ ಇದನ್ನು ಕಳೆಯೆಂದು ಬುಡಸಮೇತ ಕೀಳದಿರಿ.
ಹಲವಾರು ಒಷಧೀಯ ಗುಣಗಳಿರುವ ಸಸ್ಯವಿದು.ನಮ್ಮ ಉಪಯೋಗಕ್ಕೆ ಹೇಳುವುದಾದರೆ ಸುವರ್ಣ ಗಡ್ಡೆ ಹೋಳುಗಳನ್ನು ಬೇಯಿಸುವಾಗ ಅದಕ್ಕೆ ಒಂದುಹಿಡಿ ಮುಳ್ಳು  ಗೋಗನ ಎಲೆಗಳನ್ನು ಜಜ್ಜಿ ರಸ ಹಿಂಡಬೇಕು (ಎಲೆಗಳ ಸಂಖ್ಯೆ ಹೋಳುಗಳಿಗೆ ಅನುಸಾರವಾಗಿ).ಎಂತಹ ನಾಲಿಗೆ ತುರಿಕೆ ತರುವ ಕೇನೆಯಾದರೂ ಸರಿ ಈ ಹುಳಿ ಹಿಂಡಿದರೆ ಸಾಕು.ಹೂ ದಳದ ಗೊಜ್ಜು  ಕೂಡಾ ಬೆಳ್ಳುಳ್ಳಿ ಒಗ್ಗರಣೆಯೊಂದಿಗೆ ಊಟಕ್ಕೆ ಹಿತ.
ನಿಮ್ಮನೆ ಹಿತ್ತಲಿನ ಮೂಲೆಯಲ್ಲಿ ಈ ಕಾಡುಗೋಗ ಇದ್ದರೆ ಅದರ  ಉಪಯೋಗವನ್ನರಿಯಿರಿ. ಹೊಲದ ಸ್ಥಳಾವಕಾಶವಿದ್ದರೆ ಒಂದೆರಡು ಬೀಜ ತಂದು ಬಿತ್ತಿರಿ.
ಮುಳ್ಳು ಗೋಗು

























2 comments: