Friday, July 29, 2011

ಕುಂಟಾಲದ ಪ್ರಯೋಜನ ಆರೆಂಟು

ಕುಂಟಲದ ಗಿಡ
ಸಸ್ಯಶಾಸ್ತ್ರದ ಕೆಲವೊಂದು ಸಂಶೋಧನೆಗಳಿಗಾಗಿ ಸಸ್ಯ ಸಂಗ್ರಹಕ್ಕೆ ಹೋಗಬೇಕಿತ್ತು. 
ಮಂಗಳಗಂಗೋತ್ರಿಯ ವಿಶಾಲ ಆವರಣದಲ್ಲಿರುವ ಗುಡ್ಡಗಳಲ್ಲಿ ಬೇಕಾದಷ್ಟು ಸಸ್ಯಗಳಿವೆ ಎಂದು ಮಿತ್ರರೊಂದಿಗೆ ಅಲ್ಲಿಗೇ ಹೋಗಿದ್ದೆ.
ಗುಡ್ಡದ ತುಂಬಾ ಹುಲುಸಾಗಿ ಬೆಳೆದಿದ್ದ ಕುಂಟಲದ ಪೊದೆಗಳು ಕಡು ನೇರಳೆ ಬಣ್ಣದ ಹಣ್ಣುಗಳ ಗೊಂಚಲು ಹೊತ್ತ ಗೆಲ್ಲುಗಳು ತುಸು ಬಗ್ಗಿದ್ದವು. ಗಿಡತುಂಬ ನೇರಳೆ ಹಣ್ಣು ನೋಡಿದ ನಮಗೆ ಬೇಕಾದ ಗಿಡ ಸಂಗ್ರಹಿಸುವುದು ಬಿಟ್ಟು ಕುಂಟಲ ಸವಿಯುತ್ತಾ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ.
ಸಣ್ಣ ಗಟ್ಟಿ ಮರವಾಗಿ ಬೆಳೆಯುವ, Myrtaceae ಕುಟುಂಬ ವರ್ಗಕ್ಕೆ ಸೇರಿದ ಈ ಸಸ್ಯ ಪಶ್ಚಿಮ ಘಟ್ಟ ಹಾಗೂ ಶ್ರೀಲಂಕಾದ ಕಾಡುಗಳಲ್ಲಿ ಕಾಣ ಸಿಗುತ್ತದೆ. ನೇರಳೆ, ಪೇರಳೆಗಳ ಹೂವುಗಳಂತೆ ಸಣ್ಣ ಹೂವುಗಳು, ಗಟ್ಟಿ ಎಲೆಗಳು. ಎಳೆ ಚಿಗುರು ತಿಳಿ ಕಂದು ಬಣ್ಣದಲ್ಲಿರುತ್ತದೆ.
ಹಳ್ಳಿ ಶಾಲೆಯಲ್ಲಿ ಓದಿದವರಿಗೆ ಅಂದಿನ ಮಳೆದಿನಗಳ ಹಾದಿಯಲ್ಲಿ ಕುಂಟಲವ ಮೇಯ್ದು ಬಾಯಿ ನೇರಳೆ ಮಾಡಿ ಮೇಷ್ಟರ ಕೈಯಿಂದ ಪೆಟ್ಟು ತಿಂದ ಸವಿ ನೆನಪಿರಬಹುದು.ಸಂಜೆ ಶಾಲೆ ಬಿಟ್ಟು ಮನೆಗೆ ಹಿಂತಿರುಗುವಾಗ ಅಜ್ಜನ ಕಾಲಿನ ಬಣ್ಣದ ಕೊಡೆಯನ್ನೇ ಕೊಕ್ಕೆಯಾಗಿ ಬಳಸಿ ಬುತ್ತಿ ತುಂಬಾ ಕುಂಟಲ ಹಣ್ಣುಗಳ ತುಂಬಿಸಲು ನಮ್ಮ ನಡುವೆ ಇದ್ದ ಸ್ಪರ್ಧೆಗೆ ಸೋತು ಒಲೆ ಕಟ್ಟೆ ಮೇಲೇರುತ್ತಿದ್ದ ಒದ್ದೆಯಾದ ಪೆನ್ನು ಪುಸ್ತಕಗಳು.ತನ್ನ ಮೊಮ್ಮಕ್ಕಳ ತೋಯಿಸಿದ ಮಳೆಗೆ ಹಿಡಿ ಶಾಪ ಹಾಕುವ ಅಜ್ಜಿಗೆ ಕಾಣದಂತೆ ಅಟ್ಟದ ಕೋಣೆಯಲ್ಲಿ ಕುಳಿತು ತಿನ್ನುತ್ತಿದ್ದ, ನಮಗೆಂದೇ ಹಣ್ಣಾಗುತ್ತಿದ್ದ ಕುಂಟಲ ಹಣ್ಣುಗಳ ರುಚಿಯೇ ಬೇರೆ..  

ಮಕ್ಕಳು ತಿಂದು ಖುಷಿ ಪಡುವುದಕ್ಕಷ್ಟೇ ಸೀಮಿತವಲ್ಲ ಈ ಕುಂಟಾಲ.
ಹಾಗಾದರೆ ಅದರ ಪ್ರಯೋಜನ?
ಕುಂಟಲದ ಎಳೆಯ ಚಿಗುರುಗಳ ತಂಬುಳಿ ಆರೋಗ್ಯ ವರ್ಧಕ.
ಎಲೆ-ತೊಗಟೆ-ಹಣ್ಣು ಇತ್ಯಾದಿಗಳನ್ನು ನಾಟಿ ವೈದ್ಯರು ಮಧುಮೇಹ ಚಿಕಿತ್ಸೆಗೆ ಬಳಸುತ್ತಾರೆ. ರೋಗಾಣು ನಾಶಕ ಶಕ್ತಿ ಕುಂಟಲಕ್ಕಿದೆ. ಜ್ವರಶಮನಕ್ಕೆ ಇದರ ತೊಗಟೆಯನ್ನು ಬಳಸುತ್ತಾರೆ.

No comments:

Post a Comment