Tuesday, February 9, 2010

ದೇಸೀ ಬದನೆಗೆ ಜೈ, ಬಿಟಿಗೆ ಬೈ


ಈಗ ದೇಶವಿಡೀ ಬಿ.ಟಿ. ಬದನೆ ಅರ್ಥಾತ್ ಕುಲಾಂತರಿ ಬದನೆಯದ್ದೇ ಚರ್ಚೆ. ಸದ್ಯಕ್ಕೆ ಬಿ.ಟಿ ಬದನೆ ದೇಶಕ್ಕೆ ಬೇಡ ಎಂದು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಈ ಎಲ್ಲಾ ಬದನೆ ಚರ್ಚೆ ಒತ್ತಟ್ಟಿಗಿರಿಸಿ, ಬದನೆಯನ್ನು ಸ್ಮರಿಸಿದರೆ ನನ್ನ ಮನಸಿಗೆ ಬರುವುದು ನಾನು ಅಜ್ಜಿಮನೆಯಿಂದ ಶಾಲೆ ಹೋಗುತ್ತಿದ್ದ ಬಾಲ್ಯದಕಾಲ. ಅಜ್ಜಿಮನೆಯ ಅಂಗಳದಲ್ಲಿ ಧಾರಾಳ ಬೆಳೆದುನಿಲ್ಲುತ್ತಿದ್ದ ಎಳೆ ಬದನೆಮಿಡಿ ನೋಡಿ ಅಜ್ಜಿ ತನ್ನ ಬೊಚ್ಚುಬಾಯಿ ಬಿಟ್ಟು ‘ಇದು ಗೊಜ್ಜಿಗೆ, ಇವಿಷ್ಟು ಪಲ್ಯಕ್ಕೆ, ಆ ದೊಡ್ಡದೆರಡು ಮುಂದಿನ ವರ್ಷ ಬೀಜಕ್ಕಾತು’ ಎಂದು ನಿರ್ಧಾರ ಪ್ರಕಟಿಸುತ್ತಿದ್ದರು. ಮಾಗಿದ ಆ ಎರಡು ಬದನೆ ಹಣ್ಣು ಕೊಯ್ದು ಬೀಜ ಬೇರ್ಪಡಿಸಿ, ತೊಳೆದು ಬಿಸಿಲಲ್ಲಿ ಒಣಗಿಸಿ ನಂತರ ಹತ್ತಿಬಟ್ಟೆಯಲ್ಲಿ ಕಟ್ಟಿ ಅದನ್ನು ಯಾವುದೋ ಡಬ್ಬದಲ್ಲಿಟ್ಟು ಹೊಗೆ ಅಟ್ಟದಲ್ಲಿ ಭದ್ರವಾಗಿ ಕಾಪಿಡುತ್ತಿದ್ದರು.
ಯಾರಾದರೂ ಬದನೆ ಬೀಜ ಕೇಳಿದರೆ ಅಲ್ಲಿಂದಲೇ ಸರಬರಾಜು ಆಗುತ್ತಿತ್ತು! ಈ ಪ್ರಕ್ರಿಯೆ ಈಗಲು ನಿರಾತಂಕವಾಗಿ ಸಾಗುತ್ತಿದೆ. ಮತ್ತೆ ಮರುವರ್ಷ ಅಟ್ಟದಲ್ಲಿರುವ ಬದನೆ ಬೀಜ ಕೆಳಕ್ಕಿಳಿದು ಬಂದು ಬಿತ್ತನೆಗೆ ಸಿದ್ಧಗೊಳ್ಳುತ್ತಿದ್ದವು.

ಸ್ವಲ್ಪ ಸೆಗಣಿಯೊಂದಿಗೆ ಒಂದು ಹಿಡಿ ಬೀಜಗಳನ್ನು ಸೇರಿಸಿ ಮಿಶ್ರಮಾಡಿ ಹತ್ತಿಬಟ್ಟೆಯಲ್ಲಿ ಕಟ್ಟಿ, ಅದಕ್ಕೆ ನೀರು ಸಿಂಪಡಣೆ ಮಾಡಿ ಛಾವಣಿಗೆ ತೂಗು ಹಾಕಲಾಗುತ್ತದೆ, ಹೀಗೆ ಎರಡುವಾರ ಮಾಡಿ, ಆ ಬಳಿಕ ಈ ಗಂಟು ಬಿಚ್ಚಿನೋಡಿದರೆ ಬೀಜಗಳಲ್ಲಿ ಪುಟಾಣಿ ಸಸ್ಯಗಳು ಜೀವತಾಳಿರುತ್ತವೆ.
ಒಂದು ಬಟ್ಟಿಯಲ್ಲಿ ಫಲವತ್ತಾದ ಮಣ್ಣು ತುಂಬಿಸಿ, ಇದರಲ್ಲಿ ಪುಟ್ಟ ಸಸ್ಯಗಳನ್ನು ನಡುತ್ತಾರೆ. ಸರಿಯಾದ ಗಾಳಿ ಬಿಸಿಲು ತಾಗುವಲ್ಲಿ ಇವನ್ನು ಇರಿಸಿ, ನೀರು ಒದಗಿಸುತ್ತಿದ್ದರೆ ಸೊಂಪಾಗಿ ಬದನೆ ಗಿಡ ಬೆಳೆಯುತ್ತದೆ. ಆ ಬಳಿಕ ಪಾತಿ ಮಾಡಿ ನಟ್ಟರಾಯಿತು. ಮತ್ತೆರಡು ತಿಂಗಳಲ್ಲಿ ಬದನೆ ಗಿಡದಲ್ಲಿ ಹೂ, ಮತ್ತೆ ಕೆಲ ದಿನದಲ್ಲಿ ಕಾಯಿ ಆಗಮನ.
ಅಜ್ಜಿಮನೆಯಲ್ಲಿ ಎಷ್ಟು ಸಾಲು ಬದನೆ ಇದೆ ಎಂಬ ಮೇಲೆ ಲೆಕ್ಕಾಚಾರಗಳು ನಡೆಯುತ್ತಿದ್ದವು. ಎರಡು ಸಾಲಿದ್ದರೆ ವಾರಕ್ಕೆ ಎರಡು ಬಾರಿ ಸಾಂಬಾರ‍್, ಭಾನುವಾರಕ್ಕೆ ಪಲ್ಯ, ಮರುದಿನ ಗೊಜ್ಜು ಹೀಗೆ. ಅಷ್ಟಲ್ಲದೆ ನೆರೆ ಮನೆಯವರಿಗೂ ಬದನೆ ಹಂಚೋಣ ನಡೆಯುತ್ತದೆ.
ಈ ಸಂಭ್ರಮದ ಮಧ್ಯೆ ನಾನು ಯಾವ ಗಿಡಗಳಿಗೆ ಹುಳ ತಾಗಿದ್ದಾಗಲಿ, ಕಾಯಿ ಉದುರಿದ್ದಾಗಲೀ ನೋಡಿಲ್ಲ. ಸಾಂಬಾರಿನ ರುಚಿ ಏರಿಸುವ ಗುಳ್ಳ, ಹುಳಿಗೆ ಹೇಳಿ ಮಾಡಿಸಿದ ಉದ್ದ ಬದನೆ, ಬಿಳಿ ಬದನೆ, ಎಣ್ಣೆಕಾಯಿಗೆ ಫೇಮಸ್ ಆದ ನೀಲಿ ಚಿಕಣಿ ಬದನೆ ಹೀಗೆ ಬೆಳೆಯುತ್ತಿದ್ದರೆ ಇದರ ನಡುನಡುವೆ ಥರಹೇವಾರಿ ಚೆಂಡು ಹೂಗಳು ಕಂಗೊಳಿಸುತ್ತಿದ್ದವು.
ವೈಜ್ಞಾನಿಕವಾಗಿ ಹೇಳುವುದಾದರೆ ಈ ಚೆಂಡು ಹೂಗಿಡಗಳು ಸೂಸುವ(secondary metabolics) ವಾಸನೆಯು ಉಪದ್ರವಕಾರಕ ಕೀಟಗಳನ್ನು ದೂರವಿರಿಸುತ್ತವೆ. ಇನ್ನು ಚೆಂಡು ಹೂ ಮತ್ತು ಬದನೆ ಹೂಗಳನ್ನು ಮಾತನಾಡಿಸಲು ಬರುವ ಪಾತರಗಿತ್ತಿಗಳ ಲೋಕವೇ ಬೇರೆ.
ಈ ಬದನೆ ಗಿಡಗಳು ಮೂರು ನಾಲ್ಕು ವರ್ಷಗಳ ವರೆಗೂ ಕುಬ್ಜಮರಗಳಾಗಿ ಬೆಳೆದಿರುತ್ತವೆ, ಮತ್ತು ಅಡುಗೆಕೋಣೆಯಲ್ಲಿ ಬದನೆ ಮೇಳಕ್ಕೆ ಕಾರಣವಾಗುತ್ತವೆ.
ನನ್ನ ಅಜ್ಜಿ ಕಂಡುಕೊಂಡ ಪ್ರಯೋಗ ಎಂದರೆ ಬೀಜ ಸಿಗಲಿಲ್ಲ ಎಂದಾದರೆ ಈ ಬದನೆ ಮರಗಳ ಗೆಲ್ಲನ್ನೇ ನೆಟ್ಟರೂ ತಳಿ ಅಭಿವೃದ್ದಿಗೆ ಸಾಕು ಎನ್ನುವುದು. ಯಾಕೆ ಗೊತ್ತೆ....ಈ ನಾನಿಲ್ಲಿ ನಿಮ್ಮ ಮುಂದೆ ಅರುಹಿದ ಬದನೆ ಮಹಾತ್ಮೆಯಲ್ಲಿನ ಬದನೆಗಳೆಲ್ಲ ಶುದ್ಧ ದೇಸಿ ತಳಿಗಳು. ಅನೇಕಾನೇಕ ವರ್ಷಗಳಿಂದ ನಮ್ಮ ಹಿತ್ತಿಲಲ್ಲಿ ಮಿತ್ರರಾಗಿ ಬೆಳೆದುಬಂದವುಗಳು.
ಆದರೆ ಬದನೆ ಎಂದರೆ ಒಂದು ಜೀವಂತ ರಾಸಾಯನಿಕ ವಸ್ತು ಆಗಿಬಿಡುವುದೋ ಎಂಬ ಹೆದರಿಕೆ ಇನ್ನು ಹುಟ್ಟಲಿದೆ. ಸದ್ಯಕ್ಕೆ ಬಿ.ಟಿ ಬದನೆ ಇಲ್ಲ ಎಂದು ಸರ್ಕಾರ ಹೇಳಿದ್ದರೂ ಅದನ್ನೇನೂ ನಿಷೇಧ ಮಾಡಿಲ್ಲವಲ್ಲ!
ಅಮೆರಿಕ ಮೂಲದ ಮೊನ್ಸಾಂಟೊ ಕಂಪನಿಯ ಉಪಸಂಸ್ಥೆಯಾದ ಮೇಯ್ಕೊ ತನ್ನ ಬಯೋಟೆಕ್ ಪ್ರಯೋಗಾಲಯಗಳಲ್ಲಿ ಬಿ.ಟಿ ಬದನೆ ಎಂಬ ಕುಲಾಂತರಿ ಕೂಸನ್ನು ಸೃಷ್ಟಿಸಿದೆ. ಬದನೆಗೆ ಸಾಮಾನ್ಯವಾಗಿ ಕಾಡುವ ಕಾಯಿಕೊರಕ, ಕಾಂಡಕೊರಕ ಹುಳಗಳನ್ನು ನಾಶಪಡಿಸುವ ಗುಣವಿರುವ ಬೇಸಿಲ್ಲಸ್ ಥುರೆಂಜೆನಸ್ಸಿಸ್(ಬಿ.ಟಿ) ಎಂಬ ಬ್ಯಾಕ್ಟೀರಿಯಾ ಅಂಶವನ್ನ ಬದನೆ ತಳಿನಕ್ಷೆಯೊಳಗೆ (ಪಾರ್ಟಿಕಲ್ ಬಂಬಾರ್ಡ್‌ಮೆಂಟ್, ಮೈಕ್ರೋಇಂಜಕ್ಷನ್ ಮುಂತಾದ ತಂತ್ರಜ್ಞಾನ ಮೂಲಕ) ಸೇರಿಸಲಾಗುತ್ತದೆ.
ಈ ಬ್ಯಾಕ್ಟೀರಿಯಾ ಕೀಟಗಳ ವಿರುದ್ಧ ಹೋರಾಡುವ ಎಂಡೋಟಾಕ್ಸಿನ್‌ ಎಂಬ ಪ್ರೋಟೀನ್ ಉತ್ಪಾದಿಸುತ್ತದೆ. ಕೀಟಗಳು ಬಿಟಿ ಅಂಶವಿರುವ ಗಿಡಗಳಲ್ಲಿ ಕುಳಿತು ಚುಚ್ಚುವಾಗ, ಎಂಡೋಟಾಕ್ಸನ್ ಕೀಟದ ದೇಹ ಪ್ರವೇಶಿಸಿ, ಅಲ್ಲಿರುವ ಅಯೋನುಗಳ ಸಂಚಾರ ಸ್ಥಗಿತಗೊಳಿಸುತ್ತದೆ. ಇದರಿಂದ ಕೀಟದ ದೇಹ ತಟಸ್ಥವಾಗುತ್ತದೆ.
ಇದು ತಾತ್ಕಾಲಿಕ ಪ್ರಯೋಜನ ಅಷ್ಟೇ. ಯಾಕೆಂದರೆ ಪ್ರಯೋಗ ಕಂಡುಕೊಂಡ ಸತ್ಯವೆಂದರೆ ಈ ಪ್ರೊಟೀನ್ ವಿರುದ್ಧ ಹೋರಾಡಲು ಬೇಕಾದ ಪ್ರತಿರೋಧಕ ಶಕ್ತಿಯನ್ನು ಕೀಟಗಳು ಗಳಿಸುತ್ತವೆ. ವಾತಾವರಣದ ಒತ್ತಡದ ಜತೆಗೆ ಕೀಟಗಳು ಯಾವುದೇ ಕುಲಾಂತರಿಗಳನ್ನು ಆಕ್ರಮಿಸಲು ಸಶಕ್ತವಾಗುತ್ತವೆ.
ಬಿ.ಟಿ ತಂತ್ರಜ್ಞಾನದಿಂದಾಗಿ ಈ ಕೆಳಗಿನ ದುಷ್ಪರಿಣಾಮ ಉಂಟಾಗಬಹುದು.
  • ಅವು ಪುನಃ ಸಂಯೋಗ ರೂಪಾಂತರಗಳಿಂದಾಗಿ ಹೊಸ ವೈರಾಣು ಸೃಷ್ಟಿಸಬಹುದು.
  • ಉತ್ಪರಿವರ್ತನೆ ಅಥವಾ mutationನಿಂದಾಗಿ ಅನೇಕ ರೀತಿಯ ಕಳೆಗಿಡಗಳು ಸೃಷ್ಟಿಯಾಗಬಹುದು.
  • crosspollination(ಭಿನ್ನ ಪರಾಗಸ್ಪರ್ಶ)ದಿಂದಾಗಿ ದೇಶಿ ಮತ್ತು ಕಾಡು ತಳಿಗಳ ಗುಣಗಳಲ್ಲಿ ಕಲಬೆರಕೆ ಉಂಟಾಗಬಹುದು.
  • ಪ್ರತಿಸಲವೂ ಕುಲಾಂತರಿಸಿದ ಬೀಜಗಳಿಗಾಗಿ ಕಂಪನಿ ಮೊರೆಹೋಗಬೇಕು. ಕುಲಾಂತರಿ ಗಿಡಗಳ ಅಭಿವೃದ್ಧಿಗೆ ಪೇಟೆಂಟ್ ಗಳಿಸಿದ ಮೊನ್ಸೆಂಟೋ ಕೋಟ್ಯಂತರ ಡಾಲರ‍್ ಎಣಿಸುವ ಉಪಾಯದಲ್ಲಿದೆ.

ಭಾರತ ಹಿಂದಿನಿಂದಲೂ ಬದನೆಯ ತವರು. ಮಟ್ಟಿಗುಳ್ಳ, ಮಲಾಪುರ, ನಿರ್ಜಲಿಗೋಟ ಮುಂತಾದ ೬೦ಕ್ಕೂ ಹೆಚ್ಚು ತಳಿಗಳಿಗಳು ಬೆಳೆಗಾರರಿಗೆ ಉತ್ತಮ ಫಸಲು ನೀಡಿವೆ. solanaceae ಎಂಬ ತಳಿಗೆ ಸೇರಿದ ಬದನೆಯ ಸಸ್ಯಶಾಸ್ತ್ರೀಯ ನಾಮ solanum melongena. ಕುದನೆ, ದತ್ತೂರ ಮುಂತಾದ ಗಿಡಗಳು ಇದೇ ಕುಟುಂಬಕ್ಕೆ ಸೇರಿದವು.

ಸಂಸ್ಕೃತಿ, ಜನಜೀವನ, ಭಾಷೆ ಎಲ್ಲದರಲ್ಲೂ ವೈವಿಧ್ಯತೆ ಹೊಂದಿರುವ ಭಾರತ ಸಸ್ಯತಳಿಯಲ್ಲೂ ಸಮೃದ್ಧ ದೇಶ. ಜಾಗತೀಕರಣಕ್ಕೆ ನಮ್ಮ ಪರಂಪರೆಯ ಬುಡವೇ ಅಲ್ಲಾಡುತ್ತಿದೆ, ಕುಲಾಂತರಿ ದಾಳಿಗೆ ಸಸ್ಯಸಂಪತ್ತಿನ ಕಣಜ ಸೋರಿ ಹೋಗದಿರಲಿ.

5 comments:

  1. Very interesting and informative article! I really liked the detailed description of your grand mother's brinjal plantation methods. Please enlighten us with more of your experiences in sasya loka.

    ReplyDelete